ಕೃಷ್ಣ ಆಲ

ಮೊರೇಸೀ ಕುಟುಂಬಕ್ಕೆ ಸೇರಿದ ಫೈಕಸ್ ಬೆಂಗಾಲೆನ್ಸಿಸ್ (ಆಲ) ಪ್ರಭೇದದ ಕೃಷ್ಣ ಎಂಬ ಬಗೆಯ ಮರ.  ಇದನ್ನು ಫೈಕಸ್ ಕೃಷ್ಣೆ ಎಂಬ ಭಿನ್ನರೀತಿಯ ಪ್ರಭೇದವೆಂದು ಕರೆಯುವುದೂ ಇದೆ.  ಕೊಡೆಯಾಕಾರದ ಹಂದರ ವುಳ್ಳ ಸುಂದರವಾದ ಮರವಾದ್ದರಿಂದ ಇದನ್ನು ಉದ್ಯಾನವನಗಳಲ್ಲಿ ಅಲಂಕಾರ ಸಸ್ಯವನ್ನಾಗಿ ಬೆಳೆಸುತ್ತಾರೆ.  ಆಲದ ಮರಗಳನ್ನು ಎಲ್ಲ ಲಕ್ಷಣಗಳಲ್ಲಿ ಹೋಲುವ ಈ ಮರ ಬಟ್ಟಲಿನಾಕಾರದ ತನ್ನ ಎಲೆಗಳಿಂದಾಗಿ ಆಲದ ಮರದಿಂದ ಭಿನ್ನವಾಗಿದೆ.  ಭಾರತದ ಮೂಲವಾಸಿಯಾದ ಇದು ಬಹಳ ವಿರಳವಾಗಿ ಕಾಣಸಿಗುತ್ತದೆ.  ಬೆಂಗಳೂರಿನ ಲಾಲ್ ಬಾಗಿನಲ್ಲಿ ಈ ಮರವನ್ನು ಬೆಳೆಸಿದ್ದಾರೆ.  ಮರದ ಬುಡ ಹಾಗೂ ರೆಂಬೆಗಳು ಒರಟು.  ಎಲೆಗಳು ಸರಳ ಮಾದರಿಯವು.  ಅವಕ್ಕೆ ಉದ್ದನೆಯ ತೊಟ್ಟಿದೆ.  ಎಲೆಯ ಬುಡ ಬಟ್ಟಲಿನಂತೆ ಮಡಿಚಿಕೊಂಡಿದೆ.  ಎಲೆಯ ಮೇಲ್ಭಾಗ ಹಸುರು, ತಳಭಾಗ ಹಳದಿ ಮಿಶ್ರಿತ ಹಸರು.  ಹಣ್ಣುಗಳು ಸಾಮಾನ್ಯವಾಗಿ ಎಲೆಗಳ ಕಂಕುಳಲ್ಲಿ ಜೊತೆಜೊತೆಯಾಗಿರುತ್ತವೆ. ಗುಂಡಾಗಿರುವ ಇವುಗಳ ಮೇಲೆ ತೆಳುವಾದ ಹಾಗೂ ಮೃದುವಾದ ಕೂದಲುಗಳಿವೆ.  

	ಪವಿತ್ರವಾದ ಮರವೆಂದು ಪರಿಗಣಿಸಲಾಗಿರುವ ಕೃಷ್ಣ ಆಲ ಹಲವಾರು ದಂತಕತೆಗಳಿಗೆ ಕಾರಣವಾಗಿದೆ.  ಶ್ರೀಕೃಷ್ಣನ ಬಾಯಾರಿಕೆಯನ್ನು ನೀಗಲು ಇಬ್ಬನಿಯನ್ನು ಸಂಗ್ರಹಿಸುವುದಕ್ಕೋಸ್ಕರ ಇದರ ಎಲೆಗಳು ಬಟ್ಟಲಿನಂತಿವೆ ಎಂದು ಒಂದು ಕತೆಯಿದ್ದರೆ ಬಾಲಕೃಷ್ಣ ಬೆಣ್ಣೆ ಕದಿಯಲು ಇದರ ಎಲೆಗಳನ್ನು ಉಪಯೋಗಿಸಿದ ಎಂದು ಇನ್ನೊಂದು ಕತೆಯಿದೆ.          
  (ಎಂ.ಎಚ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ